ಹರಿದಾಸ ಸಾಹಿತ್ಯದಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡುವ ಇಚ್ಛೆ ಮೂಡಲು ಕಾರಣ ನನ್ನ ಹಿರಿಯರು ಹಾಗೂ, ಗುರು ಸಮಾನರಾದ ಒಡನಾಡಿಗಳು. ಹುಟ್ಟಿ ಬೆಳೆದ ಮನೆಯಲ್ಲಿ, ತಂದೆಯವರು ಇಭರಾಮಪುರದ ಶ್ರೀ ಅಪ್ಪಾವರ ದೌಹಿತ್ರರ ವಂಶದವರು, ತಾಯಿಯು ಸವಣೂರಿನ ಶ್ರೀ ಸತ್ಯಬೋಧ ತೀರ್ಥರ ವಂಶದವರು. ಹೀಗಾಗಿ ಧಾರ್ಮಿಕ ವಾತಾವರಣದಲ್ಲೇ ಬೆಳೆದದ್ದು. ತಂದೆಯಿಂದ ಬಂದ ಬರವಣಿಗೆಯಲ್ಲಿನ ಆಸಕ್ತಿ ನನ್ನನ್ನು ಬರವಣಿಗೆಯಲ್ಲಿ ತೊಡಗಿಸಿತ್ತು. ಹೆಚ್ಚಿನ ಅಧ್ಯಯನದ ಆಸಕ್ತಿ, ಮದುವೆಯಾದ ಮೇಲೆ ಬ್ಯಾಂಕಿಂಗ್ ವಿಷಯದಲ್ಲಿ ಎಂ ಕಾಂ ಪದವಿಗೆ ಓದಲು ಪ್ರೇರೇಪಿಸಿತ್ತು, ಮಗಳು ಪಿಯುಸಿ ಓದುವಾಗ ಅವಳೊಂದಿಗೆ ನಾನೂ ಕುಳಿತು ಓದಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ ಪಡೆದಿದ್ದೆ, ಮಗಳ ಮದುವೆಯ ನಂತರ, ಜ್ಯೋತಿಷ್ಯ ಶಾಸ್ತ್ರವನ್ನು ಓದಲು ಆರಂಭಿಸಿ, ನಂತರ ಅದರಲ್ಲೇ ಅನೇಕ ಪದವಿಗಳೊಂದಿಗೆ ಪಿ ಹೆಚ್ ಡಿ ಪದವಿಯನ್ನೂ ಪಡೆಯಲು ಕಾರಣವಾಗಿತ್ತು.
ಕರೋನ ಒಂದು ಮಹಾನ್ ಬದಲಾವಣೆಯನ್ನು ಇಡೀ ಪ್ರಪಂಚಕ್ಕೇ ತಂದಂತೆ, ಹೊಸ ಮಾಧ್ಯಮಗಳನ್ನು, ಅದರ ಸಾಧ್ಯಾಸಾಧ್ಯತೆಗಳನ್ನು ಪರಿಚಯಿಸಿತು. ಅರಿಯದೇ ಹರಿದಾಸ ಸಾಹಿತ್ಯ ಸುಧೆ ಎಂಬ ವಾಟ್ಸಪ್ ಸಮೂಹಕ್ಕೆ ಸೇರಿದ್ದು, ಹರಿದಾಸ ಸಾಹಿತ್ಯದಲ್ಲಿ ಮೊದಲಿದ್ದ ಆಸಕ್ತಿಯನ್ನು ಹೆಚ್ಚಿಸಲು ಕಾರಣವಾಯಿತು. ಅಪ್ರಚಲಿತ ಹರಿದಾಸರ ಚರಿತ್ರೆಗಳನ್ನು ಹುಡುಕಿ, ಪ್ರಸಾರ ಮಾಡುವುದು, ಹರಿದಾಸ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಉಪನ್ಯಾಸಗಳನ್ನು ಪ್ರತಿ ಭಾನುವಾರ ಏರ್ಪಡಿಸುವುದು ಹೀಗೆ ಸಕ್ರಿಯವಾಗಿ ಹರಿದಾಸ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದೆ.
ಆಗಲೇ ಅನೇಕ ಮಹಿಳಾ ಹರಿದಾಸರ ಪರಿಚಯವಾಯಿತು. ಹರಿದಾಸ ಸಾಹಿತ್ಯದ ಸವಿ, ಈಗಾಗಲೇ ಒಂದು ಪಿ ಹೆಚ್ ಡಿ ಪದವಿಯನ್ನು ಪಡೆದಿದ್ದು, ಅಧ್ಯಯನದಲ್ಲಿ ಸವಿ ಇನ್ನೊಂದು ಪಿ ಹೆಚ್ ಡಿ ಮಾಡಬೇಕೆಂಬ ಆಸೆ ಹುಟ್ಟಿಸಿತು. ಅದಾಗಲೇ ಇದ್ದ ಅನೇಕ ಮಹಿಳಾ ಹರಿದಾಸರು, ಸಾಧಕರ ಪರಿಚಯ ಇದಕ್ಕೆ ಪುಷ್ಟಿ ನೀಡಿತು. ಆಗಲೇ, ಮುಳಬಾಗಿಲಿನವರಾದ ನಮ್ಮ ಬೀಗರು, ರಾಷ್ಟೀಯ ವೇದ ವಿಜ್ಞಾನ ಸಂಸ್ಥೆಯ ವಿವರ ತಿಳಿಸಿದರು. ಅದರ ದಾರಿಯನ್ನು ಸುಗಮವಾಗಿ ಮಾಡಿದವರು ರಾಷ್ಟೀಯ ವೇದ ವಿಜ್ಞಾನ ಸಂಸ್ಥೆಯಲ್ಲೇ ಮೊದಲ ಬಾರಿಗೆ ಪಿ ಹೆಚ್ ಡಿ ಪದವಿ ಪಡೆದ ಗುಂಪಿನವರಾದ ಡಾ. ಶಾಂತಾ ರಘೂತ್ತಮಾಚಾರ್ಯ ಇವರು. ಅದಕ್ಕೆ ಭದ್ರ ಅಡಿಪಾಯ ಹಾಕಿದವರು ಡಾ. ಸುಧಾ ನರಸಿಂಗರಾವ ದೇಶಪಾಂಡೆಯವರು.
ನಂತರದ ಜಿಜ್ಞಾಸೆ ಬಂದಿದ್ದು, ವಿಷಯದ ಆಯ್ಕೆಯ ಬಗ್ಗೆ. ನನಗೇನೋ ಒಬ್ಬ ಮಹಿಳಾ ಹರಿದಾಸರ ದೀರ್ಘ ಕೃತಿಯನ್ನು ತೌಲನಿಕ ಅಧ್ಯಯನ ಮಾಡುವುದರಲ್ಲಿ ತುಂಬಾ ಆಸಕ್ತಿಯಿತ್ತು. ಆದರೆ, ಈ ಕುರಿತಾಗಿ ರಾಷ್ಟೀಯ ವೇದ ವಿಜ್ಞಾನ ಸಂಸ್ಥೆಯಲ್ಲಿಯೇ ಅನೇಕ ವರ್ಷ ಸೇವೆ ಸಲ್ಲಿಸಿದ ಡಾ. ಅನಂತಪದ್ಮನಾಭರಾವ್ ಅವರನ್ನು ಸಂಪರ್ಕಿಸಿದೆ. ಅವರು, ಒಂದೇ ಕೃತಿಯ ಅಧ್ಯಯನ ಮಾಡುವುದಕ್ಕಿಂತ, ಒಬ್ಬ ಅಪ್ರಚಲಿತ ಮಹಿಳಾ ಹರಿದಾಸರ ಸರ್ವ ಪ್ರಕಾರದ ಸಾಹಿತ್ಯವನ್ನೂ ಅಧ್ಯಯನ ಮಾಡಿದರೆ ಸಂಪೂರ್ಣವಾಗಿ ಅಧ್ಯಯನ ಮಾಡಿದಂತೆ, ಅಲ್ಲದೇ, ಅವರನ್ನು ಮುನ್ನಡೆಗೆ ತಂದಂತೆ, ಒಂದೇ ಕಡೆ ಅವರ ಬಗ್ಗೆ ಎಲ್ಲಾ ಮಾಹಿತಿ ಲಭ್ಯವಾಗುವುದು, ನಶಿಸಿಸುತ್ತಿರವ ಸಾಹಿತ್ಯವನ್ನೂ ಸಂಗ್ರಹಿಸಿದಂತೆ, ಉತ್ತಮ ಸಮಾಜ ಮುಖೀ ಕಾರ್ಯ ಎಂದರು.
ಈ ದಾರಿಯಲ್ಲಿ ಡಾ. ಸುಧಾ ನರಸಿಂಗರಾವ ದೇಶಪಾಂಡೆಯವರು, “ಅಜವಿಠಲಾಂಕಿತರಾದ, ಶ್ರೀಮತಿ ಮಂಜುಳಾ ಸುಬ್ಬರಾವ ಇವರ ಬಗ್ಗೆ ಹೇಳಿ, ಕೆಲವು ಕೃತಿಗಳನ್ನೂ ನೀಡಿ ಸಹಕರಿಸಿದ್ದಲ್ಲದೇ, ಶ್ರೀಮತಿ ಮಂಜುಳಾ ಸುಬ್ಬರಾವ ಇವರ ಮಗಳ ಪರಿಚಯವನ್ನು ಸಹ ಮಾಡಿದರು. ಅಲ್ಲದೇ ನನ್ನ ಪಿ ಹೆಚ್ ಡಿ ಅಧ್ಯಯನಕ್ಕಾಗಿ, ಡಾ. ಎಸ್ ಎಲ್ ಮಂಜುನಾಥ್ ಗುರುಗಳನ್ನು ಸಹ ಅವರೇ ಹೇಳಿದರು. ಡಾ. ಎಸ್ ಎಲ್ ಮಂಜುನಾಥ್ ಇವರನ್ನು ವಿಜಯಾ ಕಾಲೇಜಿನಲ್ಲಿ ಭೇಟಿಯಾದಾಗ ಅತ್ಯಂತ ಗೌರವದಿಂದಲೇ ಮಾರ್ಗದರ್ಶಕರಾಗಲು ಒಪ್ಪಿಕೊಂಡು, ಅಂದಿನಿಂದಲೇ ಕೆಲವು ಗ್ರಂಥಗಳ ಮಾಹಿತಿ ನೀಡಿ, ಪ್ರಬಂಧದ ತಯಾರಿಗೆ ಓಂಕಾರ ಹಾಡಿದರು.
ಶ್ರೀಮತಿ ಮಂಜುಳ ಸುಬ್ಬರಾವ ಇವರ ಅಳಿಯ ಮಂಜುಳ ಅವರ ತಮ್ಮಲ್ಲಿ ಲಭ್ಯವಿರುವ ಎಲ್ಲಾ ಪುಸ್ತಕಗಳನ್ನೂ ನೀಡಿದ್ದಲ್ಲದೇ, ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ವೇದ ವಿಜ್ಞಾನ ಸಂಸ್ಥೆಯೆ ಶ್ರೀ ಲಕ್ಷ್ಮೀನಾರಾಯಣಾಚಾರ್ಯರು ಹಾಗೂ ಡಾ. ಗೋಕುಲನಾಥ್ ಗುರುಗಳು, ಒಂದೇ ಬಾರಿಗೆ, “ಅಜವಿಠಲಾಂಕಿತರಾದ, ಶ್ರೀಮತಿ ಮಂಜುಳಾ ಸುಬ್ಬರಾವ ಇವರ ಜೀವನ ಚರಿತ್ರೆ ಹಾಗೂ ಕೃತಿಗಳು, ಒಂದು ಅಧ್ಯಯನ” ಎಂಬ ಪ್ರಬಂಧಕ್ಕಾಗಿ ಒಪ್ಪಿಗೆ ನೀಡಿದರು.
No responses yet